ಮಾನವ
ಕಶೇರುಕ ವಿಭಾಗ, ಸ್ತನಿ ವರ್ಗ, ಪ್ರೈವೇಟ್ ಉಪವರ್ಗ, ಹೋಮಿನಿಡೀ ಕುಟುಂಬದ ಏಕೈಕ ಜೀವಂತ ಜೀವಿ (ಮ್ಯಾನ್). ಪ್ರೈಮೇಟ್ ಉಪವರ್ಗದಲ್ಲಿ ಎರಡು ಮುಖ್ಯ ಉಪವರ್ಗಗಳಿವೆ; ಪ್ರೋಸಿಮಿ ಮತ್ತು ಆಂಥ್ರೊಪಾಯ್ಡಿಯದಲ್ಲಿ ಮೂರು ಅಧಿಕುಟುಂಬಗಳುಂಟು. ಅದರಲ್ಲಿ ಮುಖ್ಯವಾದದ್ದು ಹೋಮಿನಾಯ್ಡಿಯ. ಈ ಕುಟುಂಬದ ಪಾಂಗಿಡೀಯಲ್ಲಿ ವಾನರಗಳನ್ನು (ಏಪ್ಸ್) ಮತ್ತು ಹೋಮಿನಿಡೀಯಲ್ಲಿ ಮಾನವ ಮತ್ತು ಅವನ ಪೂರ್ವಜರನ್ನು ಸೇರಿಸಲಾಗಿದೆ. ಮಾನವನ ವೈಜ್ಞಾನಿಕ ಹೆಸರು ಹೋಮೊ ಸೇಪಿಯನ್ಸ್. ಇತರ ಅನೇಕ ಪ್ರೈವೇಟ್‍ಗಳಂತೆ ಮಾನವ ಒಂದೇ ಪ್ರಭೇದಕ್ಕೆ ಸೇರಿದವನು.

ಇತರ ಅನೇಕ ಪ್ರಾಣಿಗಳ ಜೀವವಿಕಾಸದ ಇತಿಹಾಸದಂತೆಯೇ ಮಾನವನ ಉಗಮ ಕೂಡ ಅಪೂರ್ಣ ಕಥೆಯಾಗಿದೆ. ಜನಸಾಮಾನ್ಯರು ಭಾವಿಸಿರುವಂತೆ ಮಾನವ ಮರದ ಮೇಲಿನ ಮಂಗಗಳಿಂದ ನೇರವಾಗಿ ಉದ್ಭವಿಸದೆ ಬಳಸು ದಾರಿಯಲ್ಲಿ ವಿಕಾಸ ಹೊಂದಿದ್ದಾನೆ. ಆಧುನಿಕ ಜೀವವಿಕಾಸ ತತ್ತ್ವದ ಜನಕ ಚಾಲ್ರ್ಸ್ ಡಾರ್ವಿನ್ (ಮಾನವನ ಪೂರ್ವಜ ಜೀವಿಗಳ ಅವಶೇಷಗಳು ಸಿಗದೆ ಇದ್ದರೂ) ವಿಕಾಸ ನಡೆದು ಬಂದಿರಬಹುದಾದ ಮಾರ್ಗದ ರೂಪರೇಖೆಗಳನ್ನು ವಿವರಿಸಿ ವಾನರ ಮತ್ತು ಮಾನವನ ಮಧ್ಯೆ ಇದ್ದಿರಬಹುದಾದ `ಕಳೆದು ಹೋದ ಕೊಂಡಿ' (ಮಿಸ್ಸಿಂಗ್ ಲಿಂಕ್) ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದ್ದ. ಅಲ್ಲಿಂದ ಶುರುವಾದ `ಕಳೆದು ಹೋದ ಕೊಂಡಿ'ಯ ಹುಡುಕಾಟ ಇನ್ನೂ ನಿರಂತರವಾಗಿ ಸಾಗಿದೆ. ಈ ದಿಸೆಯಲ್ಲಿ ಮೊತ್ತಮೊದಲನೆಯ ಗಮ ಪಳೆಯುಳಿಕೆ (ಫಾಸಿಲ್) ಸಿಕ್ಕಿದ್ದು 1856ರಲ್ಲಿ. ಜರ್ಮನಿಯ ನೀಯಂಡರ್‍ತಾಲ್ ಕೊಳ್ಳದಲ್ಲಿರುವ ಕಲ್ಲಿನ ಗಣಿಯಲ್ಲಿ ಸಿಕ್ಕಿದ ಮೂಳೆಗಳನ್ನು ಮಾನವನ ಮೂಳೆಗಳಿರಬಹುದೆಂದು ಗುರುತಿಸಿ ಪರೀಕ್ಷೆಗೆ ಕಳುಹಿಸಿದವರು ಜೋನ್ ಕಾರ್ಲ್ ಪ್ಯೊಲ್‍ಡ್‍ಲೊಟ್ ಎಂಬ ಶಾಲಾ ಶಿಕ್ಷಕ. ಹೀಗೆ ಸಿಕ್ಕಿದ ಈ ಫಾಸಿಲೀಕೃತ ಜೀವಿಗಳಿಗೆ ನೀಯಂಡರ್‍ತಾಲ್ ಮಾನವ ಎಂದು ಹೆಸರಿಸಲಾಯಿತು. ಅನಂತರ ಸಿಕ್ಕಿದ ಫಾಸಿಲ್ ಪಿತಿಕ್ಯಾಂತ್ರೊಪಸ್ ಎರೆಕ್ಟಸ್ 1894ರಲ್ಲಿ. ಹೀಗೆ ಸಾಗಿದ ಹುಡುಕಾಟ ಈಗೀಗ ಒಂದು ಹಂತಕ್ಕೆ ಬಂದು ನಿಂತಿದೆ. ಸಿಕ್ಕಿದ ಫಾಸಿಲುಗಳಲ್ಲಿ ಸುಮಾರು 9,00,000 ವರ್ಷಗಳಷ್ಟು ಹಿಂದಿನ ನೀಯಂಡರ್‍ತಾಲ್ ಹಾಗೂ ಕ್ರೊಮ್ಯಗ್ನನ್ ಮನುಷ್ಯ. ಅಂದರೆ ಆಧುನಿಕ ಮಾನವ ಭೂಮಿಯ ಮೇಲೆ ಅಸ್ತಿತ್ವಕ್ಕೆ ಬಂದದ್ದು ಒಂದು ಲೆಕ್ಕಾಚಾರದಂತೆ ಸುಮಾರು 1,00,000 ವರ್ಷಗಳ ಹಿಂದೆಯಷ್ಟೆ. ಆದರೆ ಲೀಕಿ ಮತ್ತು ಇನ್ನೂ ಅನೇಕ ಸಂಶೋಧಕರ ಅಭಿಮತದಂತೆ ಮಾನವನ ಉಗಮ ಸುಮಾರು 3 ಮಿಲಿಯನ್ ವರ್ಷಗಳ ಹಿಂದೆಯೇ ಆಗಿರಬಹುದು. ಹೇಗೆ ನೋಡಿದರೂ ಭೂಮಿಯ ಇತರ ಜೀವಿಗಳ ವಿಕಾಸದ ಸಂಗಡ ಹೋಲಿಸಿದರೆ ಮಾನವನ ಪ್ರವೇಶ ತೀರ ಇತ್ತೀಚಿನದು. 

ವಾನರಿಂದ ಮಾನವ ಉದ್ಭವಿಸಿದ ಬಗ್ಗೆ ಅನೇಕ ಊಹಾಪೋಹಗಳಿವೆ. ಅವುಗಳಲ್ಲಿ ಮುಖ್ಯವಾದ್ದು `ಬಾಲ ಪ್ರೌಢಿಮೆ ವಾದ (ನಿಯೊಟಿನಿ). ಈ ವಾದದಂತೆ ಮಾನವ ವಿಸ್ತøತ ಬಾಲ್ಯಾವಸ್ಥೆಯಲ್ಲಿರುವ ವಾನರ. ಈ ರೀತಿ ವಿಸ್ತøತ ಬಾಲ್ಯಾವಸ್ಥೆಯನ್ನು ಕೆಲವು ಪ್ರಾಣಿಗಳಲ್ಲಿ ಕಾಣಬಹುದು. ಉದಾಹರಣೆಗೆ ಆಕ್ಸಲಾಟಲ್ ಎನ್ನುವ ಸ್ಯಾಲಮ್ಯಾಂಡರ್ ಪ್ರಾಣಿಯಲ್ಲಿ ಸಾಮಾನ್ಯವಾಗಿ ಕಪ್ಪೆಗಳಂತೆ ನೀರಿನಲ್ಲಿ ಮೊಟ್ಟೆ ಇಟ್ಟು ಅವು ಗೊದಮೊಟ್ಟೆಗಳಾಗಿ ಅನಂತರ ಪ್ರೌಢ ಸ್ಯಾಲಮ್ಯಾಂಡರ್‍ಗಳಾಗಿ ಬೆಳೆಯುತ್ತವೆ. ಆದರೆ ನೀರಿನಲ್ಲಿ ಅಯೋಡಿನ್ ಅಂಶ ಕಡಿಮೆ ಇದ್ದರೆ ಗೊದಮೊಟ್ಟೆಗಳು ರೂಪ ಪರಿವರ್ತಿತವಾಗದೆ ಆ ಸ್ಥಿತಿಯಲ್ಲಿಯೇ ಪ್ರೌಢಾವಸ್ಥೆ ತಲಪಿ ಮರಿಗಳನ್ನು ಇಡುತ್ತವೆ. ಇದೇ ರೀತಿ ಯಾವುದೋ ಆಂತರಿಕ ನ್ಯೂನತೆಯಿಂದಾಗಿ ಆದಿಮಾನವನ ಅಥವಾ ವಾನರನ ಬಾಲ್ಯಾವಸ್ಥೆ ವಿಸ್ತøತಗೊಂಡು ಮಾನವನಾಗಿರಬಹುದು ಎಂಬುದೇ ಈ `ಬಾಲ ಪ್ರೌಢಿಮೆ ವಾದದ ತಿರುಳು. ಮಾನವ ಪ್ರೌಢವಸ್ಥೆಗೆ ಬರಲು 15-16ವರ್ಷಗಳು ಗತಿಸಬೇಕು; (ವಾನರ ಮತ್ತಿತರ ಜೀವಿಗಳಲ್ಲಿ ಬಾಲ್ಯಾವಸ್ಥೆ ಹೆಚ್ಚೆಂದರೆ 3-4 ವರ್ಷಗಳು ಮಾತ್ರ). ಮಾನವನಲ್ಲಿ ಸಹ ಮರಿ ವಾನರಗಳಲ್ಲಿ ಇರುವಂತೆ ಕೂದಲುಗಳು ಕಡಿಮೆ. ಮರಿ ವಾನರಗಳಲ್ಲಿ ಇರುವಂತೆ ಮಾನವನ ಮೆದುಳಿನ ಗಾತ್ರ ಹಾಗೂ ತೂಕ ಕೂಡ ತುಲನಾತ್ಮಕವಾಗಿ ಹೆಚ್ಚು, ಅಂತೆಯೇ ತಲೆಗೂ ದೇಹಕ್ಕೂ ಇರುವ ಕೋನಗಳಲ್ಲಿ ಇರುವಂತೆಯೇ ಇವೆ. 1926ರಲ್ಲಿ ಬೋಕ್ ಎಂಬ ವಿಜ್ಞಾನಿ ಈ ವಾದವನ್ನು ಮೊದಲಿಗೆ ಮಂಡಿಸಿದ. ಈ ವಾದದ ಪ್ರಕಾರ ಮಾನವನನ್ನು ಪರಿಪೂರ್ಣ ಬೆಳೆವಣಿಗೆಯನ್ನು ತಲುಪಲಾರದ ವಾನರ ಎಂದು ಪರಿಗಣಿಸುವುದರಲ್ಲಿ ಅಡ್ಡಿ ಇಲ್ಲ. ಆದರೆ ಜೀವವಿಕಾಸದ ಹಾದಿ ಇಷ್ಟು ಸುಲಭವಾಗಿಲ್ಲ. ವಿಕಾಸದ ಹಂತಗಳಲ್ಲಿ ನಡೆದಿರಬಹುದಾದ ಖಚಿತವಾದ ಬದಲಾವಣೆಗಳ ಅವಸ್ಥೆಗಳ ಬಗ್ಗೆ ಇನ್ನೂ ಸಿಗದೆ ಮಣ್ಣಿನ ಅಡಿಯಲ್ಲೆ ಹುದುಗಿಕೊಂಡಿರುವ `ಕೊಂಡಿ'ಗಳ ಬಗ್ಗೆ ಸಂಶೋಧನೆ ಆಗಬೇಕಾಗಿದೆ.

ಜೀವವಿಕಾಸ ಹಾದಿಯಲ್ಲಿ ಮಾನವ ಈ ಭೂಮಿಯ ಮೇಲೆ ಅಡಿ ಇಟ್ಟದ್ದು ತೀರ ಇತ್ತೀಚೆಗೆ. ಅಂದ ಮಾತ್ರಕ್ಕೆ ಮಾನವ ಇತರ ಎಲ್ಲ ಜೀವಿಗಳಿಗಿಂತ ಹೆಚ್ಚು ವಿಕಾಸ ಹೊಂದಿದ ಜೀವಿ ಎಂದು ತಿಳಿಯಬಾರದು. ದೇಹರಚನೆಯಲ್ಲಿ, ಶಕ್ತಿ ಸಾಮಥ್ರ್ಯದಲ್ಲಿ ಮಾನವನಿಗಿಂತ ಇನ್ನೂ ಅನೇಕಪಟ್ಟು ಹೆಚ್ಚು ಪ್ರೌಢಿಮೆ ತೋರುವ ಮಿಲಿಯಾಂತರ ವರ್ಷಗಳ ಹಿಂದೆಯೇ ವಿಕಾಸ ಹೊಂದಿದ ಜೀವಿಗಳು ಅನೇಕ ಇವೆ. ಹಾಗೆ ನೋಡಿದರೆ ಮಾನವ ಒಂದು ಹಿಂದುಳಿದ (ಪ್ರಿಮಿಟಿವ್) ಜೀವಿ ಎನ್ನಬಹುದು. ಅವನ ಕೈಕಾಲುಗಳ ಸ್ತನಿಗಳ ಪೂರ್ವಜರಂತೆ ಪಂಚಾಂಗುಲಿ (ಪೆಂಟಡ್ಯಾಕ್ಟೈಲ್) ರಚನೆ ಹೊಂದಿವೆ. 1800ಗೆ ತಿರುಗಿಸಬಹುದಾದ ಹಸ್ತ, 4:1 ಅಂತರದಲ್ಲಿ ಇರುವ ಕೈ ಬೆರಳುಗಳು. ಎಲ್ಲ ಬೆರಳುಗಳೂ ನೆಲಕ್ಕೆ ತಾಗುವಂತೆ ಇರುವ ಪಾದಗಳು, ಮರದ ರೆಂಬೆಗಳನ್ನು ಹಿಡಿಯಲು ಅನುಕೂಲವಾಗುವಂತೆ ಇರುವ ಕೈ. ಹಾಗೂ ರೆಂಬೆಗಳ ಮೇಲೆ ನಡೆದಾಡಲು ಬರುವಂಥ ಕಾಲು-ಇವು ಪ್ರಾಚೀನ ರಚನೆಯನ್ನು ತೋರಿಸುತ್ತವೆ. ಅಂತೆಯೇ ಅನೇಕ ಅವಯವಗಳ ರಚನೆ ಸಹ ಮಾನವನ ದೇಹದಲ್ಲಿ ಹೆಚ್ಚು ವಿಕಾಸ ಆಗದಿರುವುದನ್ನು ತೋರಿಸುತ್ತದೆ. ಮಾತ್ರವಲ್ಲ, ಎರಡು ಕಾಲುಗಳ ಮೇಲೆ ನಡೆದಾಡುವ ಪ್ರವೃತ್ತಿಗೂ ಮಾನವ ಸರಿಯಾಗಿ ಹೊಂದಿಕೊಂಡಿಲ್ಲ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಕಂಡುಬಂದಿದೆ. ಮುಖ್ಯವಾಗಿ ಮಾನವನನ್ನು ಬಾಧಿಸುವ ಬೆನ್ನು ಮೂಳೆಯ ನೋವು, ಬೂರು (ಹರ್ನಿಯ), ಇತ್ಯಾದಿ ಅವಸ್ಥೆಗಳು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತವೆ. ಮಾನವನಲ್ಲಿ ವಿಶೇಷವಾಗಿ ವಿಕಾಸ ಹೊಂದಿದ ಭಾಗ ಎಂದರೆ ತಲೆಬುರುಡೆ ಮತ್ತು ಮಿದುಳು.

ಮಾನವ ಇಂದು ಪ್ರಪಂಚದ ಇತರ ಜೀವಿಗಳ ಮೇಲೆ ಏಕರೂಪವಾಗಿ ಸ್ಥಾಪಿಸಿರುವ ಪ್ರಾಬಲ್ಯಕ್ಕೆ ಕಾರಣ ಅವನ ಮಿದುಳಿನ ಬೆಳೆವಣಿಗೆ. 
(ಎ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ